ಬೆವರು - 
ದ್ರವ ಅಥವಾ ಆವಿಯರೂಪದಲ್ಲಿ ಚರ್ಮದ ಮೂಲಕ ವಿಸರ್ಜಿತವಾಗುವ ದೇಹಜಲಾಂಶ (ಪಸ್ರ್ಪಿರೇಶನ್, ಸ್ವೆಟ್). ಸ್ವೇದ ಪರ್ಯಾಯ ನಾಮ. ಸಾಮಾನ್ಯವಾಗಿ ಬೆವರು ಎನ್ನುವುದು ದ್ರವರೂಪದ ಸ್ವೇದಕ್ಕೆ. ಕಾರಣ ಇದು ಗೋಚರಲಭ್ಯ. ಆವಿರೂಪದ ಸ್ವೇದ ಅಗೋಚರ. ವೈದ್ಯ ವಿಜ್ಞಾನದಲ್ಲಿ ಇದಕ್ಕೆ ಅವ್ಯಕ್ತಸ್ವೇದವೆಂದು (ಇನ್‍ಸೆನ್ಸಿಬಲ್ ಪಸ್ರ್ಪಿರೇಶನ್) ಎಂದು ಹೆಸರು. ಅವ್ಯಕ್ತವಾಗಿಯೂ ವ್ಯಕ್ತವಾಗಿಯೂ ದೇಹದ ಜಲಾಂಶ ನಷ್ಟವಾಗುತ್ತಿರುವುದರಿಂದ ದೇಹದತೂಕ ಕಡಿಮೆ ಆಗುವುದೂ ಆಹಾರಪಾನೀಯಗಳ ಸೇವನೆಯಿಂದ ಈ ನಷ್ಟ ಭರ್ತಿ ಆಗಿ ತೂಕ ಮಾಮೂಲುಮಟ್ಟಕ್ಕೆ ಏರುವುದೂ ಸ್ಪಷ್ಟ. ಬೆವರಿನ ಮೂಲಕ ಜಲಾಂಶ ವ್ಯತ್ಯಾಸವಾಗುವಷ್ಟು ನಷ್ಟವಾಗುವ ವಿಷಯ ಬಹುಶಃ ಪ್ರಾಚೀನ ವೈದ್ಯರಿಗೆ ಮನದಟ್ಟಾಗಿರಲಾರದು. ಇಟಲಿಯ ಪಾಡುವ ವಿಶ್ವವಿದ್ಯಾಲಯದ ವೈದ್ಯಕೀಯ ಪ್ರಾಧ್ಯಾಪಕನೂ ಗೆಲಿಲಿಯೋನ ಸಮಕಾಲೀನನೂ ಆಗಿದ್ದ ಸಾಂಟಾರಿಯೊ ಸಾಂಟಾನಿ (1561-1636) ಎಂಬಾತ ಬಲು ನವುರಾಗಿ ತೂಗಬಲ್ಲ ಆದರೆ ಸಾಕಷ್ಟು ದೊಡ್ಡದಾದ ತ್ರಾಸನ್ನು ಉಪಜ್ಞಿಸಿ ಅದರಲ್ಲಿ ದಿನಂಪ್ರತಿ ಗಂಟೆಗಟ್ಟಲೆ ತಾನೇ ಸತತವಾಗಿ ತೂಗಿಕೊಳ್ಳುತ್ತ ಈ ರೀತಿ ತೂಕ ಕಡಿಮೆ ಆಗುವುದನ್ನು ತೋರಿಸಿದ. ಹೀಗೆ ಒಂದು ರಾತ್ರಿಯಲ್ಲಿ ಸುಮಾರು ಒಂದು ಕಿಲೊಗ್ರಾಮಿನಷ್ಟು ತೂಕ ಕಡಿಮೆ ಆದದ್ದು ತಿಳಿಯಿತು. 

	ಅವ್ಯಕ್ತ ಸ್ವೇದೋತ್ಪತ್ತಿಗೆ ಕಾರಣಭೂತವಾದ ಯಂತ್ರವಿನ್ಯಾಸ (ಮೆಕ್ಯಾನಿಸಮ್) ಯಾವುದೂ ಇಲ್ಲವೆಂದು ತೋರುತ್ತದೆ. ಚರ್ಮದ ಹೊರಭಾಗದಲ್ಲಿ ಕೋಶಗಳು ಉದ್ಭವಿಸುತ್ತವೆ. ಇವುಗಳಲ್ಲಿ ಕಿರಾಟಿನ್ ಎಂಬ ಪ್ರೋಟೀನ್ ವಸ್ತು ಶೇಖರಗೊಂಡು ಅಂತಿಮವಾಗಿ ಇವು ನಶಿಸಿ ಹುರುಪಿನಂತಾಗಿ ವಿಸರ್ಜಿತವಾಗುತ್ತವೆ. ಈ ಹಂತದಲ್ಲಿ ಇಂಥ ಲಕ್ಷಗಟ್ಟಲೆ ಕೋಶಗಳಲ್ಲಿ ಇವುಗಳ ಜಲಾಂಶ ಆವಿಯಾಗಿ ಹೋಗುತ್ತದೆ. ಬಹುಶಃ ಈ ಜಲನಷ್ಟವೇ ಅವ್ಯಕ್ತಸ್ವೇದ. ಏಕೆಂದರೆ ಕೆಲವು ವಿಶಿಷ್ಟ ಚರ್ಮರೋಗಗಳಲ್ಲಿ ಈ ಘಟನೆಗಳ ವೇಗ ವ್ಯತ್ಯಾಸವಾದ ಸಂದರ್ಭಗಳಲ್ಲಿ ಅವ್ಯಕ್ತಸ್ವೇದದ ಪ್ರಮಾಣ ಅನುಗುಣವಾಗಿ ವ್ಯತ್ಯಾಸವಾಗುವುದು ತಿಳಿದಿದೆ. ಆದರೆ ಸಾಮಾನ್ಯವಾಗಿ ಆರೋಗ್ಯ ಸ್ಥಿತಿಯಲ್ಲಿ ಈ ಘಟನೆಗಳು ಏರುಪೇರು ಇಲ್ಲದೆ ಒಂದೇ ಸಮ ಸತತವಾಗಿ ಜರಗುತ್ತಿರುವುವು. ಆದ್ದರಿಂದ ಅವ್ಯಕ್ತ ಸ್ವೇದ ದೇಹದ ಮೇಲ್ಮೈ ವಿಸ್ತೀರ್ಣಕ್ಕೆ ಅನುಲೋಮವಾಗಿರುತ್ತದೆ. ವಯಸ್ಕರಲ್ಲಿ ಹೀಗೆ ದಿನಂಪ್ರತಿ 600-800 ಮಿಲ್‍ಗಳಷ್ಟು ಜಲಾಂಶ ನಷ್ಟವಾಗುವುದು ಇದೆ. ಈ ಜಲಾಂಶವೂ ಇದೇ ರೀತಿ ನಿಯತವಾಗಿರುವ ನಿಶ್ವಾಸದ ಜಲಾಂಶವೂ ಆವಿಯಾಗಿ ವಿಸರ್ಜಿತವಾಗುವಾಗ ದೇಹೋಷ್ಣತೆಯ ನಷ್ಟವೂ ನಿಯತವಾಗಿ ಸಂಭವಿಸುವುದು ಸ್ಪಷ್ಟ. ಅವ್ಯಕ್ತಸ್ವೇದದ ಮೂಲಕ ದಿನವೊಂದಕ್ಕೆ 400 ಕಿಲೊಕೆಲೊರಿ ಶಾಖ ನಷ್ಟವಾಗುತ್ತದೆ. 

ದ್ರವರೂಪದಲ್ಲಿ ಉತ್ಪತ್ತಿಯಾಗುವ ಸ್ವೇದ ದೇಹದ ಮೇಲ್ಮೈಯಿಂದ ಸಾಮಾನ್ಯವಾಗಿ ಆವಿಯಾಗಿ ಆರಿಹೋಗುವುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗುವಾಗಲೂ ದೇಹೋಷ್ಣತೆ ತಗ್ಗುವುದು ಸ್ಪಷ್ಟ. ವಾಸ್ತವವಾಗಿ ಈ ಕಾರಣಕ್ಕಾಗಿಯೇ ದ್ರವರೂಪದ ಸ್ವೇದದ ಉತ್ಪತ್ತಿ ಆಗುತ್ತದೆ. ಇದಕ್ಕೆ ಶಾಖ ನಿಯಂತ್ರಣ ಸ್ವೇದೋತ್ಪತ್ತಿ (ಥರ್ಮಲ್ ಸ್ವೆಟಿಂಗ್) ಎಂದು ಹೆಸರು. ವ್ಯಕ್ತಿ ಶ್ರಮ ಕಾರ್ಯ ಗೈಯುತ್ತಿರುವಾಗ ಮತ್ತು ಪರಿಸರದ ಉಷ್ಣತೆ ಹೆಚ್ಚಾಗಿರುವಾಗ (>28 ಡಿಗ್ರಿ ಸೆ.) ದೇಹೋಷ್ಣತೆಯೂ ಹೆಚ್ಚುತ್ತದೆ. ಇಂಥ ಸಂದರ್ಭಗಳಲ್ಲಿ ಸಾಮಾನ್ಯ ಉಷ್ಣವಿನಿಮಯ ವಿಧಾನಗಳಾದ ವಹನ, ನಯನ ಹಾಗೂ ವಿಕಿರಣ ಕ್ರಮಗಳಿಂದ (ಕಂಡಕ್ಷನ್, ಕನ್‍ವೆಕ್ಷನ್, ರೇಡಿಯೇಷನ್) ಅಧಿಕೋಷ್ಣವನ್ನು ಕಳೆದುಕೊಂಡು ದೇಹೋಷ್ಣತೆಯನ್ನು ನಿಯತಮಟ್ಟಕ್ಕೆ ತಂದುಕೊಳ್ಳುವುದು ಅಸಾಧ್ಯ. ದೇಹದ ಮೇಲ್ಮೈಯಿಂದ ನೀರು ಬಾಷ್ಪೀಭವಿಸುವುದೊಂದೇ ಇದಕ್ಕಿರುವ ಮಾರ್ಗ. ಆದ್ದರಿಂದ ಆ ವೇಳೆ ಮೈಮೇಲೆ ಬೆವರಿ ಅದು ಬಾಷ್ಟೀಭವಿಸುವ ಯಂತ್ರವಿನ್ಯಾಸವನ್ನು ನಿಸರ್ಗ ಒದಗಿಸಿಕೊಟ್ಟಿದೆ. 

ದೇಹೋಷ್ಣತೆ ಹೆಚ್ಚಿರುವ ವೇಳೆ ಪುನಃ ದೇಹದ ನಿಯತ ಉಷ್ಣತೆ ಮುಟ್ಟಲು ಉಷ್ಣ ಎಷ್ಟು ಮಟ್ಟಿಗೆ ಸೋರಿಹೋಗಬೇಕೊ ಅಷ್ಟಕ್ಕೆ ತಕ್ಕಂತೆ ಬೆವರಿನ ಉತ್ಪತ್ತಿ ಆಗುವುದು. ಅಂದರೆ ಬೆವರಿನ ಪ್ರಮಾಣ ಅನಿಯಮಿತ. ಗರಿಷ್ಠ ಎಂದರೆ 0.7 ಲೀಟರಿನಷ್ಟು. 5-8 ಗಂಟೆಗಳ ಅವಧಿಯಲ್ಲಿ 8-11 ಲೀಟರುಗಳಷ್ಟೂ 24 ಗಂಟೆಗಳಲ್ಲಿ 12 ಲೀಟರುಗಳಷ್ಟೂ ಬೆವರು ಉತ್ಪತ್ತಿ ಆಗುವುದು ವ್ಯಾಸಂಗಗಳಿಂದ ವಿಶದವಾಗಿದೆ. 1 ಲೀಟರ್ ನೀರು ಆವಿ ಆಗಲು 540 ಕಿಲೊಕೆಲೊರಿಗಳಷ್ಟು ಉಷ್ಣ ಬೇಕಾಗಿರುವುದರಿಂದ ಹೀಗೆ ಅಗಾಧ ಪ್ರಮಾಣದಲ್ಲಿ ಉತ್ಪತ್ತಿ ಆದ ಬೆವರು ಬಾಷ್ಪೀಭವಿಸಿದಾಗ ಕ್ರಮವಾಗಿ ಗಂಟೆಗೆ ಸುಮಾರು 1000 ಕಿಲೊಕೆಲೊರಿಗಳಷ್ಟೂ ದಿನಕ್ಕೆ 7000 ಕಿಲೊಕೆಲೊರಿಗಳಷ್ಟೂ ಉಷ್ಣ ನಷ್ಟವಾಗಲೂ ಸಾಧ್ಯ. ಚಳಿ ಇರುವಾಗ ದೇಹದ ಉಷ್ಣನಷ್ಟ ಸಾಮಾನ್ಯವಾದ ಉಷ್ಣವಿನಿಮಯ ವಿಧಾನಗಳಿಂದಲೇ ಸಾಧ್ಯವಾಗುವುದರಿಂದ ಬೆವರುವ ಮತ್ತು ಬಾಷ್ಪೀಭವನದಿಂದ ನಷ್ಟವಾಗುವ ಅಗತ್ಯ ಇರುವುದಿಲ್ಲ. ಆದ್ದರಿಂದ ಚಳಿ ಆಗಿರುವಾಗ ಬೆವರುವುದಿಲ್ಲ. 

	ಅಗತ್ಯ ಪ್ರಮಾಣದಲ್ಲಿ ಉಷ್ಣನಷ್ಟಕ್ಕೆ ತಕ್ಕಂತೆ ಬೆವರಿನ ಉತ್ಪತ್ತಿಯಾದಾಗ, ಉದ್ದೇಶ ಸಫಲವಾಗಲು ಬೆವರು ಆವಿರೂಪದಲ್ಲಿ ದೇಹದ ಮೇಲ್ಮೈಯಿಂದ ವಿಸರ್ಜಿತವಾಗಬೇಕಾದುದು ಅವಶ್ಯಕ. ಆವಿಯಾಗುವ ವೇಗಕ್ಕಿಂತ ಹೆಚ್ಚಾದ ವೇಗದಲ್ಲಿ ಬೆವರಿನ ಉತ್ಪತ್ತಿ ಆದಾಗ ಬೆವರು ಮೈ ಮೇಲೆ ಹನಿಗೂಡಿ ತೊಟ್ಟು ತೊಟ್ಟಾಗಿ ಬಿದ್ದುಹೋಗಬಹುದು. ಹೀಗಾದಾಗ ಈ ಹೆಚ್ಚಿನ ಸ್ವೇದೋತ್ಪತ್ತಿ ವ್ಯರ್ಥವೇಸರಿ. ಮೋಡ ಕವಿದುಕೊಂಡು ಸೆಕೆ ಹೆಚ್ಚಾಗಿರುವ ದಿನಗಳಲ್ಲಿ, ಅಲ್ಲೂ ಅಂಥ ದಿನಗಳಲ್ಲಿ ಶ್ರಮಕೆಲಸ ಗೈಯುವಾಗ, ಹೀಗೆ ಬೆವರು ತೊಟ್ಟಿಕ್ಕುವುದು ಎಲ್ಲರ ಗಮನಕ್ಕೂ ಬಂದಿರುವ ಸಂಗತಿ. ಕಡಲ ತೀರದ ಪ್ರದೇಶಗಳಲ್ಲಿಯ (ಉದಾಹರಣೆಗೆ ಮಂಗಳೂರು, ಕಾರವಾರ) ವಾತಾವರಣದಲ್ಲಿ ಜಲಾಂಶ ಸಾಮಾನ್ಯವಾಗಿ ಅಧಿಕವಾಗಿಯೇ ಇರುವುದರಿಂದ ಅಲ್ಲಿ ಬೆವರು ಆವಿಯಾಗಿ ಆರುವುದು ಕಷ್ಟಸಾಧ್ಯ. ಆದ್ದರಿಂದ ಅಲ್ಲಿಯ ಜನ ಬೆಳಗ್ಗೆ ಇನ್ನೂ ತಂಪಾಗಿರುವ ಕಾಲದಿಂದಲೇ ದೇಹದ ಮೇಲೆ ಸತತವಾಗಿ ಮೂಡುವ ಬೆವರು ಹನಿಗಳನ್ನು ಒರಸಿಕೊಳ್ಳತೊಡಗುವುದು ಸಾಮಾನ್ಯ. ಆದರೆ ವ್ಯಾಯಮಪಟುಗಳೂ ಕಡಲ ತೀರದಲ್ಲಿ ನೆಲೆಗಿಂತ ಜನರೂ ಅವರವರ ವಿಶೇಷ ಸಂದರ್ಭಗಳಿಗೆ ಒಗ್ಗಿಕೊಳ್ಳುವುದರಿಂದ ಅವರಲ್ಲಿ ಸ್ವೇದಾಧಿಕ್ಯ ಸ್ಥಿತಿ ಕಂಡುಬರದಿರಬಹುದು. ಸ್ಥೂಲಕಾಯರಲ್ಲಿ ದೇಹೋಷ್ಣತೆಯ ನಿಯಂತ್ರಣಕ್ಕಾಗಿ ಹೆಚ್ಚಾಗಿ ಬೆವರುವುದು ನಿಯಮ. ಇವರಲ್ಲಿ ಬೆವರುವ ವೇಗ ಅದು ಆವಿಯಾಗಿ ಆರುವ ವೇಗಕ್ಕಿಂತ ಹೆಚ್ಚಾಗಿರುವುದರಿಂದ ಅಂಥವರಲ್ಲೂ ಬೆವರು ಹನಿಯ ಪೀಡೆ ಕಂಡುಬರುವುದು ಸಾಮಾನ್ಯ. 

	ಸನ್ನಿವೇಶಕ್ಕೆ ತಕ್ಕ ಪ್ರಮಾಣದಲ್ಲಿ ಸ್ವೇದೋತ್ಪತ್ತಿ ಆಗುವುದು ನಿಯಂತ್ರಿತ ಚಟುವಟಿಕೆಯಿಂದ. ಸುಮಾರು ಇಪ್ಪತ್ತು ಲಕ್ಷ ಸ್ವೇದ ಗ್ರಂಥಿಗಳು ದೇಹದ ಎಲ್ಲೆಡೆಯೂ ಚರ್ಮದಲ್ಲಿ ಇವೆ. ಅಂಗಾಲುಗಳಲ್ಲಿ ಅವು ಅಧಿಕ ಸಂಖ್ಯೆಯಲ್ಲೂ (ಚಸೆಂಮೀಗೆ ಸುಮಾರು 400) ಬೆನ್ನಿನಲ್ಲಿ ಅತ್ಯಲ್ಪ ಸಂಖ್ಯೆಯಲ್ಲೂ (ಚಸೆಂಮೀಗೆ ಸುಮಾರು 80) ಇವೆ. ಇವುಗಳಿಗೆ ಪೂರೈಕೆ ಆಗುವ ಅನುಕಂಪೀ ನರಗಳಿಂದ ಇವುಗಳ ಚಟುವಟಿಕೆ ನಿಯಂತ್ರಿತವಾಗುತ್ತದೆ. ಈ ನರಗಳ ಕೊನೆಗಳಿಂದ ಸ್ವೇದ ಗ್ರಂಥಿಗೆ ಪ್ರಚೋದನೆ ಒಯ್ಯುವ ರಾಸಾಯನಿಕ ಮಾಧ್ಯಮ ಅಸಿಟೈಲ್ ಕೋಲಿನ್. ಆದರೆ ಮಿಕ್ಕ ಅನುಕಂಪೀ ನರಗಳ ಕೊನೆಗಳಲ್ಲಿ ಈ ಕ್ರಿಯೆ ಅಡ್ರಿನಲಿನ್ ಇಲ್ಲವೆ ನಾನಡ್ರಿನಲಿನ್ನಿನಿಂದ ಜರಗುತ್ತದೆ. ಅನುಕಂಪೀ ನರಗಳ ಮೂಲ ಮಿದುಳಿನ ಹೈಪೊಥೆಲಮಸ್ ಎಂಬ ಭಾಗ. ರಕ್ತ ಪರಿಚಲನೆ ಮತ್ತು ಉಷ್ಣವಾಹಿ ನರಗಳ ಮೂಲಕ ದೇಹೋಷ್ಣತೆಯ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಹೈಪೊಥೆಲಮಸ್ ಅನುಕಂಪೀ ನರಗಳ ಮೂಲಕ ಯುಕ್ತ ಆದೇಶಗಳನ್ನು ರವಾನಿಸಿ ಸ್ವೇದಗ್ರಂಥಿಗಳನ್ನು ಅನುಗುಣವಾಗಿ ಉದ್ರೇಕಿಸಿ ತಕ್ಕ ಪ್ರಮಾಣದಲ್ಲಿ ಸ್ವೇದೋತ್ಪತ್ತಿ ಆಗುವಂತೆಯೂ ಅಗತ್ಯಕ್ಕೆ ತಕ್ಕಷ್ಟು ಉಷ್ಣನಷ್ಟವಾಗುವಂತೆಯೂ ಮಾಡಿ ಹೆಚ್ಚಿರುವ ಉಷ್ಣ ಕಡಿಮೆ ಆಗಿ ಅದು ಮಾಮೂಲು ಮಟ್ಟಕ್ಕೆ ಬರುವಂತೆ ನಿಯಂತ್ರಿಸುತ್ತದೆ. ಅನೇಕ ವ್ಯಾಸಂಗಗಳಿಂದ ಈ ಕ್ರಿಯಾವಿನ್ಯಾಸ ಖಚಿತವಾಗಿ ವಿಶದೀPರಿಸಲ್ಪಟ್ಟಿದೆ. ಭೂಚರಿ ನಿಯತತಾಪಿಗಳಲ್ಲಿ ದೇಹೋಷ್ಣತೆ ಮಿತಿಮೀರಿ ಹೆಚ್ಚುವ ಪ್ರಮೇಯ ಇರಬಹುದಾದ್ದರಿಂದ ಇಂಥ ನಿಯಂತ್ರಣದ ಅಗತ್ಯ ಹೆಚ್ಚಾಗಿದ್ದು ಅವುಗಳಲ್ಲಿ ಸ್ವೇದಗ್ರಂಥಿಗಳು ಹೇರಳವಾಗಿ ಕಂಡುಬರುತ್ತವೆ. ಪಕ್ಷಿಗಳಲ್ಲಿ ಹಾಗೂ ಜಲಚರಿ ಮತ್ತು ಮರುಭೂಮಿವಾಸಿ ಸ್ತನಿಗಳಲ್ಲಿ ಸನ್ನಿವೇಶಕ್ಕೆ ತಕ್ಕಂಥ ದೇಹ ರಚನಾವ್ಯತ್ಯಾಸಗಳಿರುವುದರಿಂದ ನಿಯತ ದೇಹೋಷúತೆಯ ಪಾಲನೆ ಸುಲಭ. ಅಂತೆಯೆ ಅವುಗಳಲ್ಲಿ ಸ್ವೇದ ಗ್ರಂಥಿಗಳು ವಿರಳ. ಪೂರ್ಣವಾಗಿ ಲೋಪವೇ ಆಗಿರಬಹುದು. ಮೈತುಂಬ ರೋಮ ಇದ್ದು ಬೆವರು ತಕ್ಕಷ್ಟು ಶೀಘ್ರವಾಗಿ ಆರಿಹೋಗಲು ಅವಕಾಶವಿಲ್ಲದಿರುವ ದಿನ ಹಂದಿ, ನಾಯಿ ಮುಂತಾದ ಪ್ರಾಣಿಗಳಲ್ಲಿ ಮುಸುಡಿ, ಕಾಲಿನ ಪಂಜಗಳಲ್ಲಿ ಬೆವರುವುದು ಅಗತ್ಯಕ್ಕೆ ತಕ್ಕಂತೆ ಹೆಚ್ಚಾಗುತ್ತದೆ. ಮೂಷಿಕ, ಮೊಲ, ಮೇಕೆ ಈ ಪ್ರಾಣಿಗಳಲ್ಲಿ ಬೆವರುವಿಕೆ ಕಾಣಬರುವುದಿಲ್ಲವೆಂದು ತಿಳಿದಿದೆ. 

	ಮಾನವನಲ್ಲಿರುವ ಸ್ವೇದಗ್ರಂಥಿಗಳು ದೇಹೋಷ್ಣತೆಯ ಸಮತೋಲನ ಕ್ರಿಯೆಯಲ್ಲಿ ಎಷ್ಟರಮಟ್ಟಿಗೆ ಸಮರ್ಥವಾಗಿವೆ ಎಂದು ತೋರಿಸುವುದಕ್ಕೆ ಒಂದು ಪ್ರಯೋಗಮಾಡಿದ್ದಾರೆ. ಇದರಲ್ಲಿ ನಗ್ನ ವ್ಯಕ್ತಿ ಶುಷ್ಕವಾತಾವರಣದಲ್ಲಿ 100 ಡಿಗ್ರಿ ಸೆ. ಗೂ ಮೇಲ್ಪಟ್ಟ ಆವರಣ ಉಷ್ಣತೆಯನ್ನು ಹತ್ತು ಮಿನಿಟುಗಳಿಗೂ ಮೀರಿ ತಡೆದುಕೊಳ್ಳಬಲ್ಲ ಎಂದು ತೋರಿಸಲಾಗಿದೆ. ಪ್ರಯೋಗ ವ್ಯಕ್ತಿ ಧಾರಾಳವಾಗಿ ಬೆವರುತ್ತಿದ್ದು ಆ ಬೆವರು ಶೀಘ್ರವಾಗಿ ಆವಿಯಾಗಿ ಆರಿಹೋಗುತ್ತಿದ್ದುದರಿಂದಲೇ ಅವನು ಆವರಣದ ಅಗಾಧ ಉಷ್ಣತೆಯನ್ನು ತಡೆದುಕೊಳ್ಳಬಲ್ಲನಾದನೆಂಬುದೂ ಅವನ ದೇಹೋಷ್ಣತೆ ಅಂಥ ವಿಷಮ ಪರಿಸ್ಥಿತಿಯಲ್ಲಿ ಕೇವಲ ಒಂದು ಡಿಗ್ರಿಯಷ್ಟು ಮಾತ್ರ ಏರಿತ್ತೆಂಬುದೂ ಸ್ಪಷ್ಟವಾಯಿತು. ಅಗತ್ಯವಾಗಿರುವಷ್ಟು ಸ್ವೇದೋತ್ಪತ್ತಿಮಾಡುವ ಸಾಮಥ್ರ್ಯವಿರುವುದರಿಂದಲೇ ಪರಿಸರದ ಉಷ್ಣತೆಯನ್ನು ತಡೆದುಕೊಳ್ಳಬಹುದು ಎಂಬುದಕ್ಕೆ ಪುರಾವೆಯಾಗಿ ಇನ್ನೊಂದು ಸಂದರ್ಭವನ್ನು ಉದಾಹರಿಸಬಹುದು. ಕೆಲವು ವ್ಯಕ್ತಿಗಳಲ್ಲಿ ಸ್ವೇದ ಗ್ರಂಥಿಗಳು ಜನ್ಮತಃ ಲೋಪವಾಗಿರುತ್ತದೆ. ಹೀಗಾಗಿ ಅವರು ಯಾವ ಸಂದರ್ಭದಲ್ಲಿಯೂ ಬೆವರಲಾರರು. ಬೇರೆಯವರು ತಡೆದುಕೊಳ್ಳುವ ಮಟ್ಟಿನ ಆವರಣದ ಉಷ್ಣತೆಯ ಸಾಧಾರಣ ಏರಿಕೆಯನ್ನು ಕೂಡ ಅವರು ಸಹಿಸಲಾರದೆ ಶಾಖಧಕ್ಕೆಗೆ (ಹೀಟ್‍ಸ್ಟ್ರೋಕ್) ಈಡಾಗಿರುವ ಸನ್ನಿವೇಶಗಳುಂಟು.

ಸ್ವೇದೋತ್ಪತ್ತಿ ಆಗುವುದು ದೇಹೋಷ್ಣತೆಯ ನಿಯಂತ್ರಣಕ್ಕೆ ಮಾತ್ರ ಅಲ್ಲ ಎಂಬುದನ್ನು ಗಮನಿಸಬೇಕು. ಹಲವು ಬಗೆಯ ಮಾನಸಿಕ ಉದ್ವೇಗ ಸಂದರ್ಭಗಳಲ್ಲಿ ವ್ಯಕ್ತಿ ಬೆವತು ಹೋಗುವುದಿದೆ. ಸಾಮಾನ್ಯವಾಗಿ ಅಂಗೈ ಅಂಗಾಲುಗಳಲ್ಲಿ ಹೀಗೆ ಹೆಚ್ಚು ಬೆವರುವುದಾದರೂ ಕೆಲವು ಸಂದರ್ಭಗಳಲ್ಲಿ ಮುಖ ಬೆವೆತುಕೊಳ್ಳುವುದೂ ದೇಹಾದ್ಯಂತ ಬೆವರುವುದೂ ಇದೆ. ಪರಿಸರದ ಉಷ್ಣತೆ ಅಥವಾ ದೇಹದ ಉಷ್ಣತೆ ಕಡಿಮೆ ಇದ್ದರೂ ಹೀಗೆ ಬೆವರುವುದು ತಪ್ಪಿದ್ದಲ್ಲ. ಮಾನಸಿಕ ಕಾರಣಗಳಿಗಾಗಿ ಬೆವರುವುದಕ್ಕೆ ಹಿರಿಮಸ್ತಿಷ್ಕದ (ಸೆರಿಬ್ರಮ್) ಪ್ರಭಾವ ಕಾರಣ. ಕೆಲವು ವ್ಯಕ್ತಿಗಳಲ್ಲಿ ಇಂಥ ಮಾನಸಿಕ ಬೆವರುವಿಕೆ (ಮೆಂಟಲ್ ಸ್ವೆಟಿಂಗ್) ಕಂಡುಬರುವ ಸ್ಥಳಗಳಲ್ಲಿ ಸಾಮಾನ್ಯ ಸಂದರ್ಭಗಳಲ್ಲೂ ಹೆಚ್ಚು ಬೆವರುತ್ತಿರುವುದುಂಟು. ಇದಕ್ಕೆ ಸ್ವೇದಾಧಿಕ್ಯ ಅಥವಾ ಅತಿಬೆವರಿಕೆ (ಹೈಪರ್‍ಹೈಡ್ರೊಸಿಸ್) ಎಂದು ಹೆಸರು. ಈ ವ್ಯಾಧಿಗೆ ಸುಲಭ ಚಿಕಿತ್ಸೆ ಇಲ್ಲ. ಅನುಕಂಪೀ ನರಗಳ ನಿರ್ಮೂಲನದಂಥ ಕಠಿಣ ಶಸ್ತ್ರ ಚಿಕಿತ್ಸೆಯೇ ಅಗತ್ಯವಾದೀತು. ಕೆಲವು ಸಲ ವೀಳ್ಯಸೇವನೆ ಮಾಡುತ್ತಿರುವಾಗ ಸೊಕ್ಕಿದಂತಾಗಿ ಮುಖ ಬೆವೆತುಕೊಳ್ಳುವುದು ಉಂಟು. ವ್ಯಕ್ತಿ ತಡೆಯಲಾರದಷ್ಟು ಕಾರ ಪದಾರ್ಥ ಸೇವಿಸಿದಾಗಲೂ ಮುಖದಲ್ಲಿ ಬೆವರುವುದಿದೆ. ಇದಕ್ಕೆ ಆಸ್ವಾದನ ಸ್ವೇದೋತ್ಪತ್ತಿ (ಗಸ್ಟೇಟರಿ ಸ್ವೆಟಿಂಗ್) ಎಂದು ಹೆಸರು. ಬಾಯಿ, ನಾಲಿಗೆ ಈ ಸ್ಥಳಗಳಿಂದ ಉದ್ಭವಿಸುವ ಅಸಾಧಾರಣ ಸಂವೇದನೆಗಳು ಇಂಥ ಸ್ವೇದೋತ್ಪತ್ತಿಗೆ ಕಾರಣ. ಆಘಾತ ಪ್ರಸಂಗಗಳಲ್ಲಿ ಕಾಣಬರುವ ಸುಸ್ತು ಧಕ್ಕೆ (ಷಾಕ್), ಮಧುಮೂತ್ರ ರೋಗಿಗಳಲ್ಲಿ ಕಾಣಬಹುದಾದ ಇನ್ಸುಲಿನ್ ಧಕ್ಕೆ, ಹೃದಯಾಘಾತವಾದಾಗ ಕಂಡುಬರುವ ಧಕ್ಕೆ-ಈ ಸಂದರ್ಭಗಳಲ್ಲಿ ಮೈ ಎಲ್ಲ ಬೆವರಿ ಅಂಟು ಅಂಟಾಗಿಯೂ ತಣ್ಣಗಾಗಿಯೂ ಆಗುವುದು ಸಾಮಾನ್ಯ. ಇದಕ್ಕೆ ವ್ಯತಿರಿಕ್ತವಾಗಿ ಕಾರಣಾಂತರದಿಂದ ಅತ್ಯಧಿಕ ಬೆವರು ವಿಸರ್ಜನೆ ಆದ ಸಂದರ್ಭಗಳಲ್ಲಿ ಸುಸ್ತು ಧಕ್ಕೆ ಪರಿಣಮಿಸುವುದಿದೆ. ನ್ಯೂಮೋನಿಯ ಜ್ವರ ಇಳಿದಾಗ ಹಠಾತ್ತಾಗಿ ಜಿಲ್ಲೆಂದು ಬೆವರೂವೂದೂ ಹೈಪರ್ ತೈರಾಯ್ಡಿಸಮಿನಿಂದ ಪೀಡಿತರಾದ ರೋಗಿಗಳು ಸದಾ ಬೆವರುತ್ತಿರುವುದೂ ಕ್ಷಯ ರೋಗಿಗಳು ರಾತ್ರಿ ನಿದ್ರಿಸುತ್ತಿರುವಾಗ ಯಾವಾಗಲೂ ಮೈಯೆಲ್ಲ ಅತಿಯಾಗಿ ಬೆವರಿ ಚಳಿಯಾಗಿ ವ್ಯಕ್ತಿಗೆ ಎಚ್ಚರವಾಗುವುದೂ ಈ ರೋಗಗಳ ವಿಶೇಷ ಲಕ್ಷಣಗಳು. ಮಧುಮೂತ್ರ ರೋಗ, ಇಚ್‍ಥಿಯೋಸಿಸ್, ಸೋರಿಯಾಸಿಸ್, ಸ್ಕ್ಲೀರೊಡರ್ಮ ಮುಂತಾದ ರೋಗಗಳಲ್ಲಿ ಬೆವರುವುದು ಬಲು ಕಡಿಮೆ ಆಗಿದ್ದು ಚರ್ಮ ಶುಷ್ಕವಾಗಿರುತ್ತದೆ. ಶಾಖಧಕ್ಕೆಯಲ್ಲಿ ಬೆವರುವುದು ನಿಂತುಹೋಗಿ ಚರ್ಮ ಶುಷ್ಕವಾಗಿರುವುದೇ ಅಲ್ಲದೆ ಬಹಳ ಬಿಸಿಯಾಗಿಯೂ (ಸುಮಾರು 420ಸೆ.) ಇರುತ್ತದೆ. ಅನೇಕ ವಿಧವಾದ ಜ್ವರಗಳಲ್ಲಿ ದೇಹೋಷ್ಣತೆ ಹೆಚ್ಚಾಗಿದ್ದರೂ ಬೆವರು ಹೆಚ್ಚಾಗುವುದಿಲ್ಲ. ಬಹುಶಃ ಹೈಪೊಥೆಲಮಸ್ ಕಾರಣಾಂತರವಾಗಿ ಸ್ವೇದೋತ್ಪತ್ತಿಯನ್ನು ತಡೆಹಿಡಿದು ಆಯಾ ಜ್ವರದ ವಿಶಿಷ್ಟ ದೇಹೋಷ್ಣತೆ ಉಂಟಾಗುವಂತೆ ಅವಕಾಶ ಮಾಡಿಕೊಟ್ಟಿರುತ್ತದೆ. ಜ್ವರ ಇಳಿಯುವಾಗ ದೇಹದ ಅಧಿಕೋಷ್ಣತೆಯನ್ನು ಕಳೆದುಕೊಳ್ಳವುದಕ್ಕೋಸ್ಕರ ಅತಿಯಾಗಿ ಬೆವರುವುದು ಸಾಮಾನ್ಯ. ಪೈಲೊಕಾರ್ಪಿನ್, ಪಿಕ್ರೊಟಾಕ್ಸಿನ್ ನಿಕೋಟಿನ್ ಅಮೊನಿಯ, ಕರ್ಪೂರ ಈ ಮದ್ದುಗಳ ಪ್ರಯೋಗದಿಂದ ಬೆವರಿಕೆ ಹೆಚ್ಚಾಗುವುದು ಅಟ್ರೊಪೀನ್ ಮತ್ತು ಮಾರ್ಫೀನುಗಳ ಪ್ರಯೋಗದಿಂದ ಕಡಿಮೆ ಆಗುವುದೂ ತಿಳಿದಿದೆ. ವಾಸ್ತವವಾಗಿ ಮಿತಿಮೀರಿ ಜ್ವರದ ತಾಪ ಏರಿದಾಗ ಪೈಲೊಕಾರ್ಪಿನ್ನಿನಂಥ ಮದ್ದು ಕೊಟ್ಟು ಹೆಚ್ಚಾಗಿ ಬೆವರುವಂತೆ ಮಾಡಿ ಅದನ್ನು ಇಳಿಸುವ ಚಿಕಿತ್ಸಾ ಕ್ರಮ ಉಂಟು.

	ದೇಹದಲ್ಲಿ ಉತ್ಪತ್ತಿ ಆಗುವ ಅತ್ಯಲ್ಪ ಸಾಂದ್ರತೆಯ ದ್ರವಗಳ ಪೈಕಿ ಬೆವರುಕೂಡ ಒಂದು. ವಾಸನಾರಹಿತವಾಗಿ ನೀರಿನಂತೆಯೇ ಕಂಡುಬರುವ ಈ ದ್ರವದ ಸಾಂದ್ರತೆ 1.005ನ್ನು ಎಂದೂ ಮೀರುವುದಿಲ್ಲ. ಇದರಲ್ಲಿ ಘನಾಂಶ ಸಾಧಾರಣವಾಗಿ ಶೇಕಡಾ 1ರಷ್ಟು ಇರುತ್ತದೆ. ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್, ಗಂಧಕ ಸಂಯುಕ್ತ ಪ್ರೋಟೀನ್, ಯೂರಿಯ ಮತ್ತು ಫಾಸ್ಫೇಟುಗಳು. ಮೂತ್ರದಲ್ಲಿರುವಂತೆ ಬೆವರಿನಲ್ಲಿಯೂ ಪ್ರತ್ಯಾಮ್ಲೀಯ ಫಾಸ್ಫೇಟಿಗಿಂತ ಆಮ್ಲೀಯ ಫಾಸ್ಫೇಟ್ ಅಧಿಕವಾಗಿದೆ. ಹೀಗಾಗಿ ಇದು ಸ್ವಲ್ಪ ಮಟ್ಟಿಗೆ ಆಮ್ಲಗುಣ ಉಳ್ಳದ್ದಾಗಿದ್ದರೂ ಸೋಡಿಯಮ್ ಕ್ಲೋರೈಡಿನ ಪ್ರಮಾಣ ಅದಕ್ಕಿಂತ ಹೆಚ್ಚಾಗಿರುವುದರಿಂದ ಉಪ್ಪುಪ್ಪಾಗಿರುತ್ತದೆ. ಅತಿಯಾಗಿ ಬೆವರುತ್ತಿರುವಾಗ ಆಮ್ಲೀಯ ಲಕ್ಷಣವೂ ಉಪ್ಪುಪ್ಪಾಗಿರುವಿಕೆಯೂ ಕಡಿಮೆ ಆಗುತ್ತವೆ. ಹೀಗಿದ್ದರೂ ಇಂಥ ಸಂದರ್ಭಗಳಲ್ಲಿ ದೇಹದ ಜಲಾಂಶ ಅಗಾಧವಾಗಿ ಕಡಿಮೆ ಆಗುವುದು ಮಾತ್ರವಲ್ಲದೆ ಲವಣದ ಅಂಶವೂ ಗಣನೀಯವಾಗಿ ಕಡಿಮೆ ಆಗುವುದಿದೆ. ಇದರ ಪರಿಣಾಮವಾಗಿ ಇಂಥ ಅನೇಕ ವೇಳೆ ಸ್ನಾಯುಗಳ ಸೆಳೆತ (ಕ್ರಾಂಪ್ಸ್) ಕಂಡುಬರುತ್ತದೆ. ಇದರ ನಿವಾರಣೆಗಾಗಿ (ಹೇಗೂ ತೃಷೆಯೂ ಕಂಡು ಬರುವುದರಿಂದ) ನೀರನ್ನು ಸೇವಿಸಿದರೆ ಬಾಯಾರಿಕೆ ಇಂಗುವುದೇ ಹೊರತು ಸ್ನಾಯುವಿನ ಸೆಳೆತ ನಿಲ್ಲುವುದಿಲ್ಲ. ನೀರಿನೊಡನೆ ಕಿಂಚಿತ್ ಪ್ರಮಾಣದಲ್ಲಿ ಉಪ್ಪು ಬೆರೆಸಿ ಕುಡಿದರೆ ಸ್ನಾಯುಗಳ ಸೆಳೆತವೂ ಮಾಯವಾಗುತ್ತದೆ. ಔಷಧವಾಗಿ ಅಥವಾ ಇನ್ನೂ ಬೇರೆ ರೀತಿಯಲ್ಲಿ ದೇಹಕ್ಕೆ ಸೇರಿದ ಬೆಂಜೋಯಿಕ್ ಆಮ್ಲ, ಟಾರ್ಟಾರಿಕ್ ಆಮ್ಲ, ಆರ್ಸೆನಿಕ್, ಕ್ವಿನೀನ್, ಅಯೊಡೀನ್ ಮುಂತಾದ ವಸ್ತುಗಳೂ ಪಾದರಸ ಸಂಯುಕ್ತಗಳೂ ಬೆವರಿನಲ್ಲಿ ಕಂಡುಬರುತ್ತವೆ. ಆದ್ದರಿಂದ ಬೆವರು ಈ ವಸ್ತುಗಳ ವಿಸರ್ಜನೆಯಲ್ಲಿ ಭಾಗವಹಿಸುವುದೆಂದೂ ಎಂದೇ ಬೆವರಿಕೆ ಒಂದು ವಿಸರ್ಜನಾಕ್ರಮವಾಗಿದೆಯೆಂದೂ ಗಣಿಸಬಹುದು. ಕಾಮಾಲೆ ರೋಗದಲ್ಲಿ ಪಿತ್ತರಸದವರ್ಣದ್ರವ್ಯ (ಬೈಲ್ ಪಿಗ್‍ಮೆಂಟ್) ಬೆವರಿನಲ್ಲಿ ಕಂಡುಬಂದು ಬಟ್ಟೆ ಹಳದಿ ಬಣ್ಣವಾಗುವುದು ತಿಳಿದಿದೆ. ಬಾಣಂತಿಜ್ವರದಲ್ಲಿ (ಪ್ಯೂಪ್ರ್ಯೂರಿಯಲ್ ಫೀವರ್) ಬೆವರಿನಲ್ಲಿ ಲ್ಯಾಕ್ಟಿಕ್ ಆಮ್ಲ ಇರಬಹುದು. ಸಂಧಿವಾತ ಜ್ವರದಲ್ಲಿ (ರ್ಹ್ಯೂಮ್ಯಾಟಿಕ್ ಫೀವರ್) ಬೆವರಿನಲ್ಲಿ ಆಮ್ಲೀಯ ವಸ್ತುಗಳು ಹೆಚ್ಚಾಗಿರುತ್ತವೆ. ಯುರೀಮಿಯ ಎಂಬ ರೋಗಸ್ಥಿತಿ ಬೆವರು ಆರಿದಾಗ ಅಲ್ಲಲ್ಲಿ ಮಾಸಲಬಿಳಿಪುಡಿ ಅಂಟಿಕೊಂಡಿರುವಂತೆ ಕಾಣುವುದಲ್ಲದೆ ವಿಶಿಷ್ಟ ಮೂರಿ ಕೂಡ ಇರುತ್ತದೆ. ಟೈಫಾಯಿಡ್ ಜ್ವರದಲ್ಲಿಯೂ ಇದೇ ಸ್ಥಿತಿ. ನುರಿತವೈದ್ಯರು ಈ ಮೂರಿ ಗಮನಿಸಿಯೇ ರೋಗಿ ಇಂಥ ಜ್ವರದಿಂದ ನರಳುತ್ತಿದ್ದಾನೆಂದು ಊಹಿಸಬಲ್ಲರು. ಆರೋಗ್ಯ ಸ್ಥಿತಿಯಲ್ಲಿ ಅಪರೂಪವಾಗಿ ಕೆಲವರಲ್ಲಿ (ಮುಖ್ಯವಾಗಿ ಸ್ತ್ರೀವ್ಯಕ್ತಿಗಳು ಬಹಿಷ್ಠೆಯರಾಗಿದ್ದಾಗ) ಬೆವರಿನಲ್ಲಿ ನೀಲಿ, ಕೆಂಪು, ಹಸುರು, ಕಪ್ಪು ಇತ್ಯಾದಿ ವರ್ಣದ್ರವ್ಯಗಳು ಕಂಡುಬರಬಹುದು. ಈ ಸ್ಥಿತಿ ಕ್ರೋಮೈಡ್ರೋಸಿಸ್ ಎಂದು ಹೆಸರು. ಬೇಸಗೆಯಲ್ಲಿ ಅಧಿಕವಾಗಿ ಬೆವರು ಸ್ರವಿಸಲ್ಪಡುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಬೇಸಗೆ ದೂಳಿನಿಂದ ಸ್ವೇದಗ್ರಂಥಿ ನಾಳಗಳ ದ್ವಾರ ಮುಚ್ಚಿಹೋಗಬಹುದು. ಆಗ ಬೆವರು ಹೊರಬರುವುದಕ್ಕೆ ಅಡಚಣೆ ಆಗಿ ಗ್ರಂಥಿಗಳಲ್ಲಿಯೂ ನಾಳಭಾಗಗಳಲ್ಲಿಯೂ ಶೇಖರವಾಗಿ ಚರ್ಮದ ಮೇಲೆ ಬೊಕ್ಕೆಗಳು ಏಳುತ್ತವೆ. ಇವಕ್ಕೆ ಬೆವರು ಸಾಲೆ (ಪ್ರಿಕ್ಲಿಹೀಟ್) ಎಂದು ಹೆಸರು. 

	ದೇಹದಲ್ಲಿ ಕಂಕುಳು, ಸ್ತನಾಗ್ರ, ಭಗ ಈ ಸ್ಥಳಗಳಲ್ಲಿ ಬೆವರನ್ನು ಸ್ರಮಿಸುವ ಗ್ರಂಥಿಗಳ ಜೊತೆಗೆ ವಿಶಿಷ್ಟ ರೀತಿಯಲ್ಲಿ ಬೆವರು ಗ್ರಂಥಿಗಳೂ ಇರುತ್ತವೆ. ಇವು ಸಾಮಾನ್ಯ ಗ್ರಂಥಿಗಳಿಗಿಂತ ಬಲುದೊಡ್ಡವು. ಇವುಗಳಿಗೆ ನರಪೂರೈಕೆ ಆಗುವುದಿಲ್ಲ. ಅಲ್ಲದೆ ಸಾಮಾನ್ಯ ಸ್ವೇದಗ್ರಂಥಿಗಳ ಸ್ರಾವಕ್ರಿಯೆಯಲ್ಲಿ ಕಾಣಬರುವ ನರಸಾಂಬಂಧಿಕ ಕ್ರಿಯಾ ವಿನ್ಯಾಸವೂ ಕಾಣಬರುವುದಿಲ್ಲ. ಇವು ದೇಹೋಷ್ಣತೆಯ ನಿಯಂತ್ರಣದಲ್ಲಿ ಪಾಲುಗೊಳ್ಳುವುದಿಲ್ಲ. ಈ ಗ್ರಂಥಿಗಳು ಸ್ರವಿಸುವ ದ್ರವ ಅತಿನೀರಾದ ಹಾಲಿನಂತೆ ಬೆಳ್ಳಗೆ ಇರುತ್ತದೆ. ಸ್ರವಿಸಲ್ಪಟ್ಟಾಗ ವಾಸನಾರಹಿತವಾಗಿದ್ದರೂ ಶೀಘ್ರವಾಗಿ ಸ್ಥಳೀಯ ಏಕಾಣುಗಳ ಚಟುವಟಿಕೆಯಿಂದ ಸ್ರಾವ ಹುದುಗುವುದರಿಂದ ಕೆಲವು ಬಾಷ್ಪಶೀಲ ಮೇದೋಆಮ್ಲಗಳು (ವಾಲಟೈಲ್ ಫ್ಯಾಟಿ ಆಸಿಡ್ಸ್) ಉತ್ಪತ್ತಿಗೊಂಡು ವಾಸನೆ ಅಥವಾ ಮೂರಿ ಉಂಟಾಗುತ್ತದೆ. ಮೂರಿ ಒಂದು ವ್ಯಕ್ತಿಯ ಅಥವಾ ಒಂದು ಜನಾಂಗದ ವೈಶಿಷ್ಟ್ಯ ಎಂದು ವಿವರಿಸಲಾಗಿದೆ. ಅಲ್ಲದೆ ಸಾಮಾನ್ಯವಾಗಿ ಅಹಿತ ಎನ್ನಿಸುವ ಈ ಮೂಲ ಲೈಂಗಿಕ ಚಟುವಟಿಕೆಯಲ್ಲಿ ಪ್ರಾಮುಖ್ಯ ಪಡೆದಿದ್ದು ವಿಭಿನ್ನಲಿಂಗದ ವ್ಯಕ್ತಿಗಳನ್ನು ಪರಸ್ಪರ ಆಕರ್ಷಿಸಿ ತೃಪ್ತಿಪಡಿಸುತ್ತದೆ ಎಂದು ಹೇಳಲಾಗಿದೆ. ಇವಕ್ಕೆ ನರಗಳ ಪೂರೈಕೆ ಆಗುವುದಿಲ್ಲವಾದ್ದರಿಂದ ನರಗಳ ಮೂಲಕವೇ ವರ್ತಿಸುವ ಪೈಲೊಕಾರ್ಪಿನ್, ಅಟ್ರೊಪೀನ್ ಮುಂತಾದ ಮದ್ದುಗಳಿಂದ ಈ ಗ್ರಂಥಿಗಳ ಚಟುವಟಿಕೆಯನ್ನು ಪ್ರಭಾವಿಸಲಾಗುವುದಿಲ್ಲ. ಆದರೆ ರಕ್ತದಲ್ಲಿರುವ ಅಡ್ರೀನಲಿನ್ ಈ ಗ್ರಂಥಿಗಳನ್ನು ನೇರವಾಗಿ ಪ್ರಚೋದಿಸುವುದು ತಿಳಿದಿದೆ. ಲೈಂಗಿಕ ಕ್ರಿಯೆಯ ವೇಳೆ ಮನೋದ್ರೇಕ ಸ್ಥಿತಿಯಲ್ಲಿ ರಕ್ತದಲ್ಲಿ ಅಡ್ರೀನಲಿನ್ನಿನ ಮಟ್ಟ ಹೆಚ್ಚುವುದರಿಂದ ಈ ಗ್ರಂಥಿಗಳ ಸ್ರಾವ ಆ ಕಾಲದಲ್ಲಿ ಹೆಚ್ಚಿಮೊದಲೇ ಆ ಸ್ಥಳದಲ್ಲಿ ಉದ್ಭವಿಸಿರುವ ಮೂರಿಯನ್ನ ಪ್ರಸರಿಸುವುದೆಂದು ವಿಶದೀಕರಿಸಲಾಗಿದೆ. 

	ಆಶ್ಚರ್ಯದ ಸಂಗತಿ ಎಂದರೆ ಕುದುರೆಗಳಲ್ಲಿ ಕಂಡುಬರುವ ಸ್ವೇದಗ್ರಂಥಿಗಳು ಈ ತೆರನವೇ. ಅವಕ್ಕೂ ನರಪೂರೈಕೆ ಆಗುವುದಿಲ್ಲ. ಅವುಗಳ ಚಟುವಟಿಕೆಯೂ ರಕ್ತದಲ್ಲಿರುವ ಅಡ್ರೀನಲಿನ್ನಿನ ಮಟ್ಟವನ್ನು ಅವಲಂಬಿಸಿದೆ. ಆದರೂ ಅವು ಮನುಷ್ಯರಲ್ಲಿ ಉತ್ಪತ್ತಿಯಾಗುವಂಥ ಮತ್ತು ವಾಸನಾಯುಕ್ತವಾದಂಥ ದ್ರವವನ್ನು ಸ್ರವಿಸದೇ ಸಾಮಾನ್ಯ ಬೆವರನ್ನೇ ಸ್ರವಿಸುತ್ತವೆ. ಅಲ್ಲದೆ ಮನುಷ್ಯರಲ್ಲಿ ಸಾಮಾನ್ಯ ಸ್ವೇದಗ್ರಂಥಿಗಳು ದೇಹೋಷ್ಣತೆಯ ನಿಯಂತ್ರಣದಲ್ಲಿ ಪಾಲುಗೊಳ್ಳುವಂತೆಯೇ ಇವು ಕುದುರೆಯ ದೇಹೋಷ್ಣತೆಯ ನಿಯಂತ್ರಣದಲ್ಲಿ ಪಾಲುಗೊಳ್ಳುವುದು ತಿಳಿದಿದೆ. 

	16ನೆಯ ಶತಮಾನದಲ್ಲಿ ಕಂಡುಬರುವ ಬೆವರುರೋಗ (ಸ್ವೆಟಿಂಗ್ ಸಿಕ್‍ನೆಸ್, ಇಂಗ್ಗಿಷ್ ಸ್ವೆಟ್ ಎಪಿಡೆಮಿಕ್) ಎಂಬ ಒಂದು ತೀವ್ರಮಾರಕ ಸ್ಥಿತಿಯನ್ನು ಆಗಿನ ಪ್ರಸಿದ್ಧ ಇಂಗ್ಲಿಷ್ ವೈದ್ಯ ಕಯಸ್ ಎಂಬಾತ ವಿವರಿಸಿದ್ದಾನೆ. 1506, 1517, 1528, 1551, 1578 ಈ ಇಸವಿಗಳಲ್ಲಿ ಇದು ವ್ಯಾಪಕಪಿಡುಗಾಗಿ (ಎಪಿಡೆಮಿಕ್) ಕಂಡುಬಂದು ಮುಖ್ಯವಾಗಿ ಇಂಗ್ಲೆಂಡ್ ಮತ್ತು ವಾಯುವ್ಯ ಯೂರೊಪಿನಲ್ಲಿ ಜನತೆಯನ್ನು ಪೀಡಿಸಿತು. ಚಳಿ, ತಲೆನೋವು, ಅತೀವಸುಸ್ತು ಇವುಗಳಿಂದ ರೋಗ ಪ್ರಾರಂಭವಾಗಿ 3-4 ಗಂಟೆಗಳಲ್ಲಿ ದೇಹ ತೊಯ್ದು ಹೋಗುವಷ್ಟು ಬೆವರಿ ಮಂಪರಬಂದು ರೋಗಿಗಳು ಮೃತ್ಯುಹೊಂದುತ್ತಿದ್ದರೆಂದು ವಿವರವಿದೆ. 24 ಗಂಟೆಗಳ ಒಳಗೆ ಮೃತ್ಯುಹೊಂದದಿದ್ದರೆ ವ್ಯಕ್ತಿ ಸಾಮಾನ್ಯವಾಗಿ ಬದುಕಿಕೊಳ್ಳುತ್ತಿದ್ದರೂ ರೋಗ ಮರುಕಳಿಸುವ ಇಲ್ಲವೇ ಪುನಃ ಪ್ರಾರಂಭವಾಗುವ ಅಪಾಯವಿತ್ತು ಎಂದೂ ಹೇಳಿದೆ. ಮಾಗಿಕಾಲದ ಕೊನೆಯ ಇಲ್ಲವೆ ವಸಂತ ಕಾಲದ ಮೊದಲ ದಿನಗಳಲ್ಲಿ ಕಾಣಬರುತ್ತಿದ್ದ ಈ ರೋಗ ಅನುಕೂಲಸ್ಥರು ಮತ್ತು ಆರೋಗ್ಯವಾಗಿದ್ದವರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು ಎಂದು ಕಯಸ್ ವಿವರಿಸಿದ್ದಾನೆ. ಮುಂದಿನ ಶತಮಾನಗಳಲ್ಲಿ ಇಂಥ ರೋಗವನ್ನು ಯಾರೂ ವಿವರಿಸಿರುವುದು ಪತ್ತೆ ಆಗಿಲ್ಲ. ವಿಶಿಷ್ಟ ಲಕ್ಷಣಗಳಿದ್ದ ಒಂದು ರೋಗ ಹಠಾತ್ತಾಗಿ ತಂತಾನೇ ಅದೃಶ್ಯವಾಯಿತು ಎನ್ನುವುದು ಸಮಂಜಸವಲ್ಲ. ಬಹುಶಃ ಈಗಲೂ ವೈಯಕ್ತಿಕವಾಗಿ ಕಾಣಬರುವ ಮತ್ತು ಅಗಾಧ ಬೆವರುವಿಕೆ ಲಕ್ಷಣವಾಗಿರುವ ಯಾವುದೋ ರೋಗ ಆ ದಿನಗಳಲ್ಲಿ ಪಿಡುಗಾಗಿ ಕಂಡು ಬಂದುದರಿಂದಲೂ ಆಧುನಿಕ ರೀತಿಯ ವೈದ್ಯ ಚಿಕಿತ್ಸಾ ಕ್ರಮಗಳು ಆಗ ಇನ್ನೂ ಪ್ರಾರಂಭದೆಶೆಯಲ್ಲಿದ್ದುದರಿಂದಲೂ ಈ ರೋಗ ಒಂದು ಮಹಾಮಾರಿ ರೋಗ ಎನ್ನಿಸಿತ್ತೆಂದು ತೋರುತ್ತದೆ. ಕೈಯಸನ ರೋಗ ವಿವರಣೆಯನ್ನು 1952ರಲ್ಲಿ ಪುನಃ ಅವಲೋಕಿಸಿದ ಮರ್ಲೆಸ್ ಎಂಬ ವೈದ್ಯ ಬೆವರು ರೋಗ ಇಂದಿನ ಮರುಕಳಿಸುವಜ್ವರ (ರಿಲಾಪ್ಸಿಂಗ್ ಫೀವರ್) ಇರಬಹುದು ಎಂದಿದ್ದಾನೆ. 				
 (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ